Thursday, 11 October 2012

ಹೆಮ್ಮೆಯ ಕನ್ನಡಿಗರು.....!!

ನಮಸ್ತೆ ಗೆಳೆಯರೇ.

ನಮ್ಮ ಎಷ್ಟೋ ಜನ ಕನ್ನಡಿಗರಿಗೆ ತಿಳಿಯದು ಜಗತ್ತಿನ ಎಷ್ಟೋ ಆರಂಭಗಳಿಗೆ ಕನ್ನಡಿಗರೇ ಮೊದಲಿಗರು ಎಂದು.

ವ್ಯಾಪಾರ : ಬಹುಷಃ ನಿಮಗೆ ಯಾರಿಗೂ ತಿಳಿದಿಲ್ಲ, ಕನ್ನಡಿಗರ ವ್ಯಾಪಾರದ ವೈಕರಿ, ನ್ನಡಿಗರು ಹರಪ್ಪ ನಾಗರೀಕತೆಯ ಜನರೊಂದಿಗಿನ ವ್ಯಾಪಾರದ ವಹಿವಾಟು ನಡೆಸುತ್ತಿದ್ದರು, ಇದು ಅಕ್ಷರಸಹ ಸತ್ಯ, ಇದಕ್ಕೆ ಸಾಕ್ಷಿ ಎನ್ನುವ ಹಾಗೆ
ಕರ್ನಾಟಕದಲ್ಲಿ ನಡೆದ ಭೂ ಶೋಧನೆಯಲ್ಲಿ ದೊರೆತಿರುವ ಕೊಡಲಿ ಮತ್ತು ಕತ್ತಿಗಳು (ಕಲ್ಲಿನ ಆಯುಧಗಳು) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕ್ರತಿಯ ಇರುವಿಕೆಗೆ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕ್ರತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ. ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು ಕರ್ನಾಟಕದ ಗಣಿಗಳಿಂದ ಆಮದು ಮಾಡಲ್ಪಟ್ಟಿರುವ ಚಿನ್ನ, ವಿಚಾರದಿಂದ ವಿದ್ವಾಂಸರು ಕ್ರಿ.ಪೂ.೩೦೦೦ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರಿಕತೆ ನಡುವೆ ಇರುವ ಸಂಭಂದಕ್ಕೆ ಸಾಕ್ಷಿಯಾಗಿವೆ ಎನ್ನುವ ಪುರಾವೆಗಳನ್ನು ನೀಡಿದ್ದಾರೆ.
ವಾಸ್ತುಶಿಲ್ಪ ತಂತ್ರಜ್ಞಾನ : ಕನ್ನಡಿಗರು ವಾಸ್ತು ಶಿಲ್ಪದಲ್ಲಿಯು ಕೂಡ ಮುಂಚೂಣಿಯಲ್ಲಿದ್ದವರು. ಭಾರತದ ವಾಸ್ತುಶಿಲ್ಪವು ಒಂದು ತೂಕವಾದರೆ, ಕನ್ನಡಿಗರ ವಾಸ್ತುಶಿಲ್ಪ ಇನ್ನೊಂದು ತೂಕ. ಇದಕ್ಕೆ ಹುಗ್ಗುರುತು ಎನ್ನುವ ಹಾಗೆ ಹಲವಾರು ಸ್ಮಾರಕಗಳು ಕೋಟೆಗಳು ಈಗಲೂ ನಮ್ಮ ಮುಂದಿವೆ. ವಿಶ್ವದಲ್ಲೇ ಎಲ್ಲೂ ಕಾಣಲು ಸಾಧ್ಯವಾಗದ ವಿಶ್ವದ ಅತಿ ಬೃಹತ್ ಏಕಶಿಲಾ ವಿಗ್ರಹ, ಒಂದೇ ಕಲ್ಲಿನ ರಥ, ಸಂಗೀತದ ಕಲ್ಲಿನ ಕಂಬಗಳು, ಪುರಾತನ ಗುಹಾಂತದ ದೇವಾಲಯಗಳು ಕನ್ನಡಿಗರದಲ್ಲದೆ ಮತ್ತಿನೇನು.


ವಿಜ್ಞಾನ-ತಂತ್ರಜ್ಞಾನಕ್ಕೆ : ವಿಜ್ಞಾನ-ತಂತ್ರಜ್ಞಾನದಲ್ಲೂ ಕೂಡ ಕನ್ನಡಿಗರು ಯಾವತ್ತು ಹಿಂದೆ ಬಿದ್ದವರಲ್ಲ. ಇದಕ್ಕೆ ಉದಾಹರಣೆ,

ವಿಮಾನವನ್ನು ಕಂಡು ಹಿಡಿದವರು "ಆನೇಕಲ್ ಸುಬ್ಬಾಶಾಸ್ತ್ರಿ",

ಕ್ರಿ. ಶ. ೮೦೦ ರಲ್ಲಿ ಜೀವಿಸಿದ "ಸೈಗೊಟ್ಟ ಶಿವರಾಮರ-ಗಜಶಾಸ್ತ್ರ",

ಕ್ರಿ. ಶ. ೯೪೨ - ೧೦೨೫ರಲ್ಲಿ ೨ನೇ ಚಾವುಂಡರಾಯ ಬರೆದ "ಲೋಕೋಪಕಾರ" ಗ್ರಂತ (ಬಂಡೆಕಲ್ಲು ಒಡೆಯುವ ಕ್ರಮ, ಹಣ್ಣುಗಳಲ್ಲಿ ಬೀಜವಿಲ್ಲದಂತೆ ಮಾಡುವ ಕಲೆ, ಕ್ಷಯ ನಿವಾರಣೆ, ವಿಷವನ್ನು ಶಮನ ಮಾಡುವ ಬಗೆ, ಬುದ್ದಿವರ್ಧನೆಗೆ ಔಷಧೋಪಚಾರ) ಕನ್ನಡದಲ್ಲಿದೆ.

ಕ್ರಿ. ಶ. ೧೦೪೦ರ ಕಾಲದಲ್ಲಿ ಜೀವಿಸಿದ ಚಂದ್ರರಾಜರು ಬರೆದ "ಮದನತಿಲಕ" ಎನ್ನುವ ಕನ್ನಡದ "ಕಾಮಶಾಸ್ತ್ರ".

ಕ್ರಿ. ಶ. ೧೦೪೯ ರಲ್ಲಿ ಶ್ರೀಧರಾಚಾರ್ಯರು ರಚಿಸಿದ ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ "ಜಾತಕ ತಿಲಕ".

ಕ್ರಿ. ಶ. ೧೧೨೦ ರ ಕಾಲದಲ್ಲಿ ಜೀವಿಸಿದ ರಾಜಾದಿತ್ಯರು ರಚಿಸಿದ "ಗಣಿತ ಗ್ರಂಥ". ಇದು ಕೇವಲ ಸಾಮಾನ್ಯ ಗಣಿತವಾಗಿರದೆ, ಶ್ರೇಣಿಗಳ ಗಣಿತವಾಗಿತ್ತು ಎನ್ನುವುದು ಗಮನಾರ್ಹವಾದದ್ದು.

ಕ್ರಿ. ಶ. ೧೧೫೦ ರ ಕಾಲದಲ್ಲಿ ಜೀವಿಸಿದ "ಜಗದ್ಧಳ ಸೋಮನಾಥರು ರಚಿಸಿದ ಕಲ್ಯಾಣಕಾರವೆಂಬ ಗ್ರಂಥ ಕನ್ನಡದ ಮೊದಲ ವೈದ್ಯ ಶಾಸ್ತ್ರ ಗ್ರಂಥ.

ಕ್ರಿ. ಶ. ೧೧೫೦ ರ ಕಾಲದಲ್ಲಿ ಜೀವಿಸಿದ "ರಟ್ಟಕವಿ" ರಚಿಸಿದ "ರಟ್ಟಶಾಸ್ತ್ರ" (ಮಳೆ, ಬೆಳೆ ,ನೀರು ,ಹವಾಮಾನ, ವಾಯುಗುಣ, ಬಿತ್ತನೆ ಮತ್ತು ಅಂತರ್ಜಲ ಇರುವ ಸ್ಥಳವನ್ನು ಕರಾರುವಕ್ಕಾಗಿ ಕಂಡು ಹಿಡಿಯುವ ಕಲೆ) ಕನ್ನಡದಲ್ಲಿದೆ.

ಇಷ್ಟೆಲ್ಲಾ ಯಾಕೆ ಈಗಿನ ಕಾಲದ ಅತ್ಯಾಧುನಿಕ ಕ್ಷಿಪಣಿಗಳನ್ನು ಕನ್ನಡಿಗರು ೧೭ನೆ ಶತಮಾನದಲ್ಲೇ ಬಳಸಿಲ್ಲವೇ.

೧೯ ನೆ ಶತಮಾನದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ವಿಧ್ಯುತ್ತನ್ನು ತಯಾರಿಸಲು ಸ್ಥಾವರಗಳನ್ನು ಸ್ಥಾಪಿಸಿದವರು ಕನ್ನಡಿಗರು ವಿಧ್ಯುತ್ತನ್ನು ಬಳಸಿದವರು ಕನ್ನಡಿಗರು.

ಇಷ್ಟೆಲ್ಲಾ ಏಕೆ "ಭಗವತ್ ಗೀತೆ"ಗೆ ಸಮನಾದ ಅಧುನಿಕ ಭಗವತ್ ಗೀತೆ " ಡಿ.ವಿ.ಜಿ.ಯವರ ಪದ್ಯ ಪುಸ್ತಕ "ಮಂಕು ತಿಮ್ಮನ ಕಗ್ಗ" ಇರುವುದು ಕನ್ನಡದಲ್ಲೇ ಮತ್ತು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು ಕನ್ನಡಿಗರೇ ಹೊರತು ಮತ್ತಾರು ಅಲ್ಲ.

ಶಿಕ್ಷಣ : ಮೀಸಲಾತಿ ಶಿಕ್ಷಣವನ್ನು ಮೊದಲಬಾರಿಗೆ ಜಾರಿಗೆ ತಂದವರು ಕನ್ನಡಿಗರೇ.

ಚಲನ ಚಿತ್ರ: ಒಮ್ಮೆ ನಮ್ಮ ಕರ್ನಾಟಕದ ಇತಿಹಾಸವನ್ನು ನೋಡಿದರೆ ನಮಗೆ ಕಾಣುವ ಮೊದಲ ಹಂತದ ಘಟಾನುಘಟಿ ರಾಜರುಗಳು ಎಂದರೆ, "ಮಯೂರ ವರ್ಮ, ಇಮ್ಮಡಿ ಪುಲಿಕೇಶೀ, ಶ್ರೀ ಕೃಷ್ಣದೇವರಾಯ ಮತ್ತು ರಣಧೀರ ಕಂಠೀರವ" ಇವರನ್ನು ನಾವ್ಯಾರು ಕಣ್ಣಾರೆ ಕಂಡಿಲ್ಲ, ಆದರೆ ಅವರು ಹೇಗಿರಬಹುದು ಎನ್ನುವದನ್ನು ನಾವು ನಮ್ಮ ಕನ್ನಡದ "ವರನಟ ಡಾ!! ರಾಜ್ ಕುಮಾರ್" ಅಭಿನಯದ ಚಲನ ಚಿತ್ರಗಳ ಮೂಲಖ ಕಾಣಬಹುದಾಗಿದೆ. ಇವರು ಸಹ ಕನ್ನಡಿಗರೇ ಹೊರತು ಮತ್ತಾರು ಅಲ್ಲ.

 - ಧನ್ಯವಾದಗಳು.

ಮಂಜುನಾಥ ಗೌಡ


Thursday, 4 October 2012

ಹೆಸರಾಯಿತು ಕರ್ನಾಟಕ - ಉಸಿರಾಗಲಿ ಕನ್ನಡ

ಪುಕ್ಕಟೆಯಾಗಿ ಸಿಗಲಿಲ್ಲ ನಮಗೆ ನಮ್ಮಯ ಕರುನಾಡು : ಕರ್ನಾಟಕದ ಏಕೀಕರಣ

ಪುಕ್ಕಟೆಯಾಗಿ ಸಿಗಲಿಲ್ಲ ನಮಗೆ ನಮ್ಮಯ ಕರುನಾಡು ಕಾರಣ ಐದು ಭಾಗಗಳಾಗಿ ಹರಿದು ಹಂಚಿ ಹೋದ ಕರ್ನಾಟಕವನ್ನು (ಮೈಸೂರು ಸಂಸ್ಥಾನ, ಮದ್ರಾಸು, ಬಾಂಬೆ, ಹೈದರಾಬಾದ್ ಹೀಗೆ ನಾಲ್ಕು ಬಾಗಗಳಲ್ಲಿ ಬ್ರಿಟಿಷರ ಅಡಿನದಲ್ಲಿ ರಾಜಮನೆತನಗಳು ಹಾಗೂ ಕೊಡಗು ಪ್ರದೇಶದಲ್ಲಿ ಬ್ರಿಟಿಷರ ನೇರ ಆಳ್ವಿಕೆ) ಒಂದು ಮಾಡಿ ಈ "ವಿಶಾಲ ಕರ್ನಾಟಕ"ವನ್ನು ಕನ್ನಡಿಗರಿಗಾಗಿ ಸಮರ್ಪಿಸಿದರು. ನಮ್ಮ ಕರ್ನಾಟಕದ ಏಕೀಕರಣದ ಸಂಗ್ರಾಮ ಹಲವು ದಶಕಗಳ ಕಾಲ ನಡೆಯಿತು. ಈ ಸಂಗ್ರಾಮದ ಬಹು ಮುಖ್ಯವಾದ ವ್ಯಕ್ತಿ. "ಆಲೂರು ವೆಂಕಟರಾಯರು" ಇವರನ್ನು ಕನ್ನಡಿಗರು ಬಹು ಪ್ರೀತಿಯಿಂದ "ಕನ್ನಡ ಕುಲ ಪುರೋಹಿತ"ರು ಎಂದು ಕರೆಯುತ್ತಾರೆ. ಇವರ ಕಾಲಮಾನ ಕ್ರಿ.ಶ. ೧೨ ಜುಲೈ ೧೮೮೦ ರಿಂದ ಕ್ರಿ.ಶ. ೨೫ ಫೆಬ್ರವರಿ ೧೯೬೪ ವರೆಗೆ. ವೆಂಕಟರಾಯರ ತಂದೆ "ಭೀಮ ರಾವ್" ಮತ್ತು ತಾಯಿ "ಭಾಗೀರಥಿ ಭಾಯಿ"



ಹರಿದು ಹಂಚಿಹೋದ ಕರ್ನಾಟಕದ ಭೂಪ್ರದೇಶಗಳು.

೧) ಮೈಸೂರು ಒಡೆಯರ ಆಳ್ವಿಕೆಗೆ ಒಂಬತ್ತು ಜಿಲ್ಲೆಗಳು.
೨) ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮದ್ರಾಸ್ ಸಂಸ್ಥಾನಕ್ಕೆ.
೩) ಬೀದರ್ ಗುಲ್ಬರ್ಗ ಮತ್ತು ರಾಯಚೂರು ಈ ಮೂರು ಜಿಲ್ಲೆಗಳು ಹೈದಾರಬಾದಿನ ನವಾಬರ ಅದೀನಕ್ಕೆ.
೪) ಕೊಡಗನ್ನು ನೇರವಾಗಿ ಬ್ರಿಟಿಷರೆ ತಮ್ಮ ಅದೀನಕ್ಕೆ ತೆಗೆದುಕೊಂಡರು.
೫) ದಾರವಾಡ, ಉತ್ತರ ಕನ್ನಡ, ಬಿಜಾಪುರ ಮತ್ತು ಬೆಳಗಾವಿ ಈ ನಾಲ್ಕು ಜಿಲ್ಲೆಗಳು ಬಂಬಾಯಿಯ ಸಂಸ್ಥಾನಕ್ಕೆ.



ಮಹಾರಾಷ್ಟ್ರದ ಜನತೆ "ಬಾಲಗಂಗಾಧರ ತಿಲಕ" ರನ್ನು ಹೇಗೆ ಸ್ಮರಿಸುತಾರೋ ಹಾಗೆ ನಮ್ಮ ಕನ್ನಡಿಗರು "ಆಲೂರು ವೆಂಕಟರಾಯರನ್ನು" ಸ್ಮರಿಸಬೇಕು.
ಕರ್ನಾಟಕದ ಏಕೀಕರಣದಿಂದ ಮಾತ್ರ ಸಾಧ್ಯವಾಗುವುದು "ಕನ್ನಡಿಗರಿಗಾಗಿ ಪ್ರತ್ಯೇಕ ರಾಜ್ಯ", ಇದಕ್ಕಾಗಿ ೧೮೫೬ರಲ್ಲಿ ಕನ್ನಡಿಗರ ಮೊದಲ ಹೆಜ್ಜೆ ಮತ್ತು ೧೮೯೦ ರಲ್ಲಿ " ಕರ್ನಾಟಕ ವಿಧ್ಯಾವರ್ಧಕ ಸಂಘ" ಸ್ಥಾಪನೆಯಾಯಿತು, ಆಲೂರು ವೆಂಕಟರಾಯರು ಈ ಚಳುವಳಿಗೆ ದುಮುಕಿದ ನಂತರ ಕರ್ನಾಟಕದ ಏಕೀಕರಣದ ಸ್ವರೂಪವೇ ಬದಲಾಯಿತು. ೧೯೧೭ರಲ್ಲಿ ವೆಂಕಟರಾಯರು ಹೊರ ತಂದ "ಕರ್ನಾಟಕ ಗತ ವೈಭವ" ( ಬ್ರಿಟಿಷರ ಆಕ್ರಮಣದ ಹಿಂದಿನ ದಿನಗಳ ಕನ್ನಡಿಗರ ಚರಿತೆಯ ಕುರಿತಾದ ಪುಸ್ತಕ) ಎನುವ ಪುಸ್ತಕವು ಕನ್ನಡಿಗರ ಮೇಲೆ ಹೆಚ್ಚು ಪ್ರಭಾವ ಬೀರಿತು. ಮತ್ತು ಏಕೀಕರಣಕ್ಕೆ ಕನ್ನಡಿಗರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು.

ಕರ್ನಾಟಕ ಗತ ವೈಭವ : ಈ ಪುಸ್ತಕವನ್ನು ಬರೆಯಲು ೧೩ ವರ್ಷಗಳ ಕಾಲ ಸಮಯ ವ್ಯಯಿಸಬೇಕಾಯಿತು, ಕನ್ನಡದ ಶಿಲಾಶಾಸನಗಳು, ನಾಣ್ಯಗಳು ಮತ್ತು ಪುರಾತನ ಸ್ಮಾರಕಗಳ ಮುಖಾಂತರ ಮಾಹಿತಿ ಸಂಗ್ರಹಿಸಿ, ಈಪುಸ್ತಕವನ್ನು ಹೊರತಂದರು. ಇದೆ ಪುಸ್ತಕ ೨೦೦೭ರಲ್ಲಿ ತನ್ನ ೯೦ ವರ್ಷಗಳನ್ನು ಪೂರೈಸಿತು.

ಆನಂತರ ವೆಂಕಟರಾಯರು ಬರೆಯುವುದನ್ನು ಮುಂದುವರೆಸಿದರು, ಅನೇಕ ಶಾಲೆಗಳನ್ನು ಮತ್ತು ಗ್ರಂಥಾಲಯಗಳನ್ನು ಸ್ಥಾಪಿಸಿದರು, ನಿರಂತರ ೫೦ ವರ್ಷಗಳ ಹೋರಾಟದ ನಂತರ ೧೯೫೬ರಲ್ಲಿ ಕನ್ನಡಿಗರ ಕನಸಿನ ಕರ್ನಾಟಕ ಮೈಸೂರು ರಾಜ್ಯ ಎಂದು ರಚನೆಯಾಯಿತು ಇದರ ಹೆಗ್ಗುರುತಾಗಿ "ಹಂಪೆಯ ಉಗ್ರನರಸಿಂಹ ಸ್ವಾಮಿ"ಗೆ ಅಭಿಷೇಕ ಮಾಡುವುದರೊಂದಿಗೆ ಕನ್ನಡಿಗರು ವಿಜ್ರುಂಬಣೆಯಿಂದ ಕರ್ನಾಟಕದ ಮಹೋತ್ಸವವನ್ನು ಆಚ್ಜರಿಸಿದರು, ನಿರಂತರ ಹೋರಾಟಗಳಿಂದ ದಣಿದಿದ್ದ ನಮ್ಮ "ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾಯರು" ಕ್ರಿ.ಶ. ೨೫ ಫೆಬ್ರವರಿ ೧೯೬೪ ರಲ್ಲಿ ವಿಧಿವಶರಾದರು. ಅವರ ಮರಣದ ನಂತರವೂ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಡಬೇಕು, ಎನ್ನುವ ಹೋರಾಟ ಮುಂದುವರೆಯಿತು, ಮೈಸೂರು ರಾಜ್ಯ ರಚನೆಯಾದ ನಂತರ ೧೮ ವರ್ಷಗಳ ನಿರಂತರ ಕಾನೂನು ಹೋರಾಟದಲ್ಲಿ ೧೯೭೪ ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ಮರುನಾಮಕರಣವಾಯಿತು.

ಹೀಗೆ ಕನ್ನಡಿಗರಿಗೆ ಕರ್ನಾಟಕ ದೊರೆಯಿತು.


ಹೆಸರಾಯಿತು ಕರ್ನಾಟಕ - ಉಸಿರಾಗಲಿ  ಕನ್ನಡ




 - ಇಂತಿ ನಿಮ್ಮ ಪ್ರೀತಿಯ ಗೆಳೆಯ.
ಮಂಜುನಾಥ ಗೌಡ
 

Wednesday, 3 October 2012

ರಾಜವೈಭವ ಸ್ಫುರಿಸುವ ಮೈಸೂರ ಅರಮನೆ



ಶಾನಿ
ಅಖಂಡ ಭರತ ಖಂಡದ ಪ್ರಮುಖ ಆಕರ್ಷಣೆಗಳಲ್ಲಿ ಮೈಸೂರು ಒಂದು. ಈ ಮೈಸೂರಿಗೆ ಅರಮನೆಯೇ ಕಿರೀಟ. ಅರಮನೆಗಳ ನಗರವೆಂಬ ಖ್ಯಾತಿವೆತ್ತ ಮೈಸೂರಿನಲ್ಲಿರುವ ಸುಂದರ ಅರಮನೆಯದ್ದು ಸೂಜಿಗಲ್ಲಿನ ಸೆಳೆತ.
ಈ ಅರಮನೆಗಳ ನಾಡಿನಲ್ಲಿ ಮೈದಳೆದು ನಿಂತಿರುವ "ಅಂಬಾ ವಿಲಾಸ" ಮೈಸೂರು ಸಂಸ್ಥಾನವನ್ನು ಶತಮಾನಗಳ ಕಾಲ ಆಳಿದ ಒಡೆಯರ್ ವಂಶದ ಅರಸರ ಖಾಸಗೀ ನಿವಾಸ ಮತ್ತು ದರ್ಬಾರ್ ಹಾಲ್ ಆಗಿದ್ದಿತು.
ದಿನನಿತ್ಯ ದೀಪಾಲಂಕಾರದಿಂದ ಕಂಗೊಳಿಸುವ ಅರಮನೆಗೆ ದಸರಾ ವೇಳೆ ವಿಶೇಷ ಅಲಂಕಾರ. ಅರಮನೆಗೆ ಅರಮನೆಯೇ ಸಾಟಿ. ಈ ವೇಳೆ ಸಾರ್ವಜನಿಕ ವೀಕ್ಷಣೆಗೆ ಅರಮನೆ ಲಭ್ಯ. ಅರಸು ಕಾಲದ ಆ ವೈಭವನ್ನು ಕಣ್ಣಲ್ಲಿ ತುಂಬಿಕೊಂಡಷ್ಟೂ ತುಳುಕುತ್ತದೆ. ನೋಡಿದಷ್ಟೂ ಮುಗಿಯುವುದಿಲ್ಲ. ಮತ್ತೆ ಮತ್ತೆ ಕಣ್ ಸೆಳೆಯುತ್ತದೆ.

ಜಗನ್ಮೋಹನ ಅರಮನೆ, ಜಯಲಕ್ಷ್ಮಿ ವಿಲಾಸ, ಕಾರಂಜಿ ಮಹಲ್, ಲಲಿತ ಮಹಲ್, ಚೆಲುವಾಂಬ ಮಹಲ್ ಇಲ್ಲಿರುವ ಇತರ ಪ್ರಮುಖ ಅರಮನೆಗಳು.
ಇಂಡೋ ಸಾರ್ಸನಿಕ್ ಶೈಲಿಯ ನಿರ್ಮಾಣದ ಅಂಬಾವಿಲಾಸವನ್ನು ಕಲ್ಲಿನಲ್ಲಿ ಕಟ್ಟಲಾಗಿದ್ದು, ಮೂರು ಮಹಡಿಗಳಿವೆ. ಅರಮನೆಯ ಸುತ್ತಲೂ ವಿಶಾಲವಾದ ಹಸಿರು ಉದ್ಯಾನವಿದೆ.
ಕಂಬಗಳಿಗೆ ಕೆಂಪು ಅಮೃತಶಿಲೆಯ ಹೊದಿಕೆ. ಒಳಗೆಲ್ಲಾ ಚಿನ್ನದ ಲೇಪನದ ಕಲಾ ವೈಭವ. ಈ ಅರಮನೆಯ ವಾಸ್ತುಶಿಲ್ಪಿ ಬ್ರಿಟಿಷ್ ಎಂಜಿನಿಯರ್ ಹೆನ್ರಿ ಇರ್ವಿನ್. 1897ರಲ್ಲಿ ರಾಜಕುಮಾರಿ ಜಯಲಕ್ಷಮ್ಮಣ್ಣಿಯವರ ವಿವಾಹದ ವೇಳೆಯಲ್ಲಿ ಅರಮನೆಗೆ ಬೆಂಕಿ ಬಿದ್ದು ನಾಶವಾದಾಗ ಮೈಸೂರು ಮಹಾರಾಣಿಯವರಾಗಿದ್ದ ಕೆ೦ಪನ೦ಜಮ್ಮಣ್ಣಿ, ವಾಣಿವಿಲಾಸ ಸನ್ನಿಧಾನ ಹೊಸ ಅರಮನೆಯ ನಿರ್ಮಾಣಕ್ಕೆ ಮುಂದಾದರು.

ವಿವಿಧ ರೀತಿಯ ವಾಸ್ತುಕಲೆಗಳನ್ನು ಸಂಯೋಜಿಸಲಾಗಿದ್ದು, ಹಿಂದೂ, ಮುಸ್ಲಿಂ ಮತ್ತು ಗೋಥಿಕ್ ಶೈಲಿಯ ವಾಸ್ತುವನ್ನು ಪ್ರಮುಖವಾಗಿ ಬಳಸಲಾಗಿದೆ. ಅರಮನೆಯ ಮುಂಭಾಗದಲ್ಲಿ ಏಳು ವಿಶಾಲವಾದ ಮತ್ತು ಎರಡು ಚಿಕ್ಕ ಕಮಾನುಗಳಿವೆ. ಮಧ್ಯದ ಕಮಾನಿನ ಮೇಲಿರುವ ಗಜಲಕ್ಷ್ಮಿಯ ಶಿಲ್ಪ ಹೃದಯಂಗಮ.


ಅರಮನೆಯ ಕೋಣೆಗಳು:

ಮುಘಲ್ ದೊರೆಗಳ ಅರಮನೆಗಳ ಶೈಲಿಯ ದಿವಾನ್-ಇ-ಖಾಸ್ ಅತೀ ವೈಭವವನ್ನು ಚಿಮ್ಮುತ್ತದೆ. ಪ್ರಪಂಚದ ಪ್ರಮುಖ ಕಲೆಗಳ ಕೆತ್ತನೆ, ಅತಿ ಸುಂದರ ಸ್ತಂಭಗಳು, ಕರಿಮರದ ಕೆತ್ತನೆಯ ದಂತಖಚಿತ ವಿಶಾಲವಾದ ಬಾಗಿಲುಗಳು, ಹರಳುಗಳ ಅಲಂಕೃತ, ಕನ್ನಡಿಯಂದದ ನೆಲ, ಇವೆಲ್ಲವುಗಳ ಅಲಂಕಾರ ನೋಡಿದಷ್ಟೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಅತ್ಯಂತ ಗಣ್ಯರ ಆಗಮನದ ವೇಳೆ ಖುದ್ದು ರಾಜರು ಅತಿಥಿಗಳನ್ನು ಎದುರುಗೊಳ್ಳುತ್ತಿದ್ದ ಸ್ಥಳವಂತೆ ಇದು.

ಅಂತೆಯ ರಾಜರುಗಳು ದರ್ಬಾರು ನಡೆಸುತ್ತಿದ್ದ, ದರ್ಬಾರ್ ಹಾಲ್, ದಿವಾನ್-ಇ-ಆಮ್ ಕಲ್ಯಾಣ ಮಂಟಪ, ಗೊಂಬೆ ತೊಟ್ಟಿ ಇವುಗಳು ಇತಿಹಾಸವನ್ನು ಸಾರುತ್ತಿವೆ. ಕಲ್ಯಾಣ ಮಂಟಪದ ಗೋಡೆಯ ಮೇಲೆ ಬರೆದಿರುವ ಚಿತ್ತಾರಗಳು, ತೈಲವರ್ಣದ ಕಲಾಕೃತಿಗಳು ಹಿಂದಿನ ಕಾಲದ ಮೆರವಣಿಗೆ ಮತ್ತು ದಸರಾದ ಭವ್ಯತೆಯನ್ನು ಬಿಂಬಿಸುತ್ತವೆ. ಗೊಂಬೆತೊಟ್ಟಿಯಲ್ಲಿ ಹಳೆಯ ಸಾಂಪ್ರದಾಯಿಕ ಗೊಂಬೆಗಳಿವೆ. ಆಗ ಅರಸೊತ್ತಿಗೆಯ ಮಂದಿಯನ್ನೊಯ್ಯಲು ಬಳಸುತ್ತಿದ್ದ 84 ಕೆಜಿ ಚಿನ್ನದ ಕುಸುರಿಯಿಂದ ಅಲಂಕರಿಸಿರುವ ಮರದ ಅಂಬಾರಿ ಇಲ್ಲಿದೆ.


ಆಯುಧಶಾಲೆ:
ಬೇರೆಲ್ಲ ಕೋಣೆಯದ್ದು ಒಂದು ತೂಕವಾದರೆ, ಆಯುಧಶಾಲೆಯದ್ದು ಇನ್ನೊಂದು ತೂಕ. ರಾಜಮನೆತನದವರು ಬಳಸುತ್ತಿದ್ದ ವಿವಿಧ ಬಗೆಯ ಆಯುಧಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. 14ನೆ ಶತಮಾನದಲ್ಲಿ ಉಪಯೋಗಿಸಲ್ಪಡುತ್ತಿದ್ದ ಖಡ್ಗ, ಸುರಗಿ, ವ್ಯಾಘ್ರನಖ ಮುಂತಾದ ಆಯುಧಗಳ ತಾಳಕ್ಕೆ 20ನೆಯ ಶತಮಾನದ ಪಿಸ್ತೂಲುಗಳು, ಬ೦ದೂಕುಗಳ ಮೇಳವಿದೆ.
ಒಡೆಯರ್ ವ೦ಶದ ಪ್ರಸಿದ್ಧ ಅರಸು ರಣಧೀರ ಕ೦ಠೀರವ ಅವರು ಉಪಯೋಗಿಸಿದ್ದ ಖಡ್ಗಗಳಲ್ಲಿ ಒ೦ದಾದ 'ವಜ್ರಮುಷ್ಠಿ' ಇಲ್ಲಿದೆ. ಇನ್ನು ಕೆಲವುಗಳು ಮೈಸೂರು ಹುಲಿ ಟೀಪು ಸುಲ್ತಾನ್ ಮತ್ತು ಹೈದರ್ ಅಲಿ ಉಪಯೋಗಿಸುತ್ತಿದ್ದ ಖಡ್ಗಗಳು.

ಅರಮನೆಯ ಆವರಣದಲ್ಲಿ 12 ದೇವಾಲಯಗಳಿವೆ. ಇವುಗಳಲ್ಲಿ ಸೋಮೇಶ್ವರ ಮತ್ತು ಲಕ್ಷ್ಮೀರಮಣ ದೇವಾಲಯಗಳು ಸುಪ್ರಸಿದ್ಧ. 14ನೆ ಶತಮಾನದಲ್ಲಿ ನಿರ್ಮಾಣವಾಗಿರುವ ಕೋಡಿಭೈರವನ ದೇವಾಲಯ ಅತ್ಯಂತ ಪುರಾತನವಾಗಿದ್ದರೆ, 1953ರಲ್ಲಿ ನಿರ್ಮಾಣವಾಗಿರುವ ದೇವಾಲಯ ಇತ್ತೀಚಿನದ್ದು.


ಕೊಡುಗೆ : ವೆಬ್ ದುನಿಯಾ ವಿಶೇಷ ದಸರಾ

 - ಇಂತಿ ನಿಮ್ಮ ಪ್ರೀತಿಯ ಗೆಳೆಯ
ಮಂಜುನಾಥ ಗೌಡ.