Tuesday, 25 September 2012

ಪುಟ್ಟ ಮತ್ತು ಕೋಳಿ ಮಾರುವವನು.



ಒಂದು ಸಣ್ಣ ಊರು ಆ ಊರಿನ ಕೊನೆಯಲ್ಲಿ ಒಂದು ಸಣ್ಣ ಗುಡಿಸಲು, ಆ ಗುಡಿಸಲಲ್ಲಿ ಪುಟ್ಟ ಮತ್ತು ಪುಟ್ಟಣ ತಾಯಿ ರಂಗಮ್ಮ ಜೀವನ ನಡೆಸುತ್ತಿರುತ್ತಾನೆ. ಆ ಊರಿನ ಗೌಡರ ಮನೆಯಲ್ಲಿ ರಂಗಮ್ಮನ ಕೆಲಸ, ಗೌಡರಿಗೆ ಪುಟ್ಟನೆಂದರೆ ಪಂಚಪ್ರಾಣ ಕಾರಣ ಪುಟ್ಟ ತುಂಬಾ ಬುದ್ದಿವಂತ, ಆದರೆ ಅವನಿಗೆ ಒಂದು ಕಾಲು ಇರಲಿಲ್ಲ ಇದರಿಂದ ಊರಿನ ಇತರೆ ಮಕ್ಕಳು "ಕುಂಠ - ಕುಂಠ" ಎಂದು ರೇಗಿಸುತ್ತಿದ್ದರು ಆದರೆ ನಮ್ಮ ಪುಟ್ಟ ಅದರ ಬಗ್ಗೆ ಪ್ರತಿಕ್ರಿಯಿಸುತ್ತಿರಲಿಲ್ಲ.

ಒಂದು ದಿನ ಆ ಊರಿಗೆ ಒಬ್ಬ ಕೋಳಿ ಮಾರುವವನು ಬಂದ, ಗೌಡರು ಕೋಳಿ ವ್ಯಾಪಾರ ಮಾಡುತ್ತಿದ್ದರು, ಆ ಕೋಳಿಗಳ ಹಿಂಡಿನಲ್ಲಿ ಒಂದು ಕಾಲಿನ ಕೋಳಿ ಮರಿ ಕುಂಟುತ್ತ ಆಡುತ್ತಿತ್ತು ಅದನ್ನು ಪುಟ್ಟ ತೆಗೆದುಕೊಂಡು ಇದನ್ನು ತನಗೆ ಕೊಡಿಸಲು ಗೌಡರಿಗೆ ವಿನಯದಿಂದ ಕೇಳಿದನು, ಆದರೆ ಕೋಳಿ ಮಾರುವವನು ಆಶ್ಚರ್ಯದಿಂದ ಕೇಳಿದ ಅಲ್ಲ ಮಗು ಈ ಹಿಂಡಿನಲ್ಲಿ ಎಷ್ಟೊಂದು ಒಳ್ಳೊಳ್ಳೆ ಕೋಳಿಗಳಿರಬೇಕಾದರೆ ನಿನಗೆ ಈ ಒಂಟಿ ಕಾಲಿನ ಕೋಳಿ ಯಾಕೆ ಬೇಕು ಎಂದು ಕೇಳಿದ. ಪುಟ್ಟ ತುಂಬಾ ಸೌಜನ್ಯದಿಂದ ತನ್ನ ಷರಾಯಿಯಾ (ಪ್ಯಾಂಟು) ಒಂದು ಕಾಲಿನ ಬಟ್ಟೆಯನ್ನು ಮೇಲಕ್ಕೆ ಸರಿಸಿ ತನ್ನ ಕೃತಕ ಕಾಲನ್ನು ತೋರಿಸಿ ಹೀಗೆ ಹೇಳಿದ.

ಅಂಗ ವೈಕಲ್ಯ ಒಂದು ಶಾಪವಲ್ಲ - ಇದು ನಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಪ್ರಪಂಚದಲ್ಲಿ ಅತಿ ಪ್ರಾಮುಖ್ಯ ಮತ್ತು ಕಷ್ಟಕರವಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು ನಮ್ಮಂತಹ ಅಂಗ ವಿಕಲತೆ ಇರುವವರು. ಅಂಗ ವಿಕಲತೆ ಇರುವುದು ನನ್ನ ದೇಹಕ್ಕೆ ಹೊರತು ನನ್ನ ಬುದ್ದಿ ಶಕ್ತಿಗಲ್ಲ ನನ್ನ ಮಾನಸಿಕ ಶಕ್ತಿಗಲ್ಲ. ಎಂದು ಬುದ್ದಿಮಾತನ್ನು ಹೇಳಿದನು.

ಅಂಗ ವಿಕಲರಿಗೆ ಬೇಕಾಗಿರುವುದು ಅವಕಾಶ - ಅನುಕಂಪವಲ್ಲ.
ಕೆಲಸ ಕೊಡಿ - ಬಿಕ್ಷೆ ಹಾಕಬೇಡಿ.
ಬುದ್ದಿಮಾತು ಹೇಳಿ - ಅಲ್ಲಗಳೆಯಬೇಡಿ.
ಸಹಾಯ ಮಾಡಿ - ಕಷ್ಟ ಕೊಡಬೇಡಿ.
ನಮ್ಮಲ್ಲಿ ನಂಬಿಕೆಯಿಡಿ - ನೋಯಿಸಬೇಡಿ.
ನಮ್ಮನ್ನು ಮಾನವೀಯತೆಯಿಂದ ನೋಡಿ - ಅಮಾನವೀಯತೆ ಬೇಡ.

 - ಇಂತಿ ನಿಮ್ಮ ಪ್ರೀತಿಯ ಗೆಳೆಯ.

ಮಂಜುನಾಥ ಗೌಡ.
 

No comments:

Post a Comment